ಗ್ರ್ಯಾಪ್ಟೊಲೈಟುಗಳು

ನಿರ್ನಾಮವಾಗಿರುವ ಪ್ರಾಣಿಗಳ ಒಂದು ವರ್ಗ. ಪ್ರಾಚೀನ ಜೀವಿಕಲ್ಪದ ಪೂರ್ವಾರ್ಧದಲ್ಲಿ, ಅದರಲ್ಲೂ ಆರ್ಡೊವಿಸಿಯನ್ ಮತ್ತು ಸೈಲೂರಿಯನ್ ಎಂಬೆರಡು ಯುಗಗಳಲ್ಲಿ ಮಾತ್ರ, ಈ ಪ್ರಾಣಿಗಳೂ ಜೀವಿಸಿದ್ದವು. ಆಗ ಅವು ಅಧಿಕ ಸಂಖ್ಯೆಯಲ್ಲಿ ವೃದ್ಧಿಸಿ ಭೌಗೋಳಿಕವಾಗಿ ವಿಶೇಷ ವ್ಯಾಪ್ತಿ ಪಡೆದಿದ್ದುವು. ಆದ್ದರಿಂದ ಆರ್ಡೊವಿಸಿಯನ್ ಮತ್ತು ಸೈಲೂರಿಯನ್ ಕಾಲಗಳ ಶಿಲಾಸ್ತೋಮಗಳ ವಿಸ್ತøತ ವಿಭಜನೆ ಮತ್ತು ಪರಸ್ಪರ ಸಂಬಂಧ ನಿರ್ಣಯದಲ್ಲಿ ಗ್ರ್ಯಾಪ್ಟೊಲೈಟುಗಳೇ ಮುಖ್ಯವಾದ ಆಧಾರಗಳು. ಈ ಪ್ರಾಣಿಗಳು ಜೇಡು ನಿಕ್ಷೇಪ ಪ್ರದೇಶಗಳಲ್ಲಿ ಹೇರಳವಾಗಿಯೂ ಮರಳು ಅಥವಾ ಸುಣ್ಣ ನಿಕ್ಷೇಪ ಪ್ರದೇಶಗಳಲ್ಲಿ ವಿರಳವಾಗಿಯೂ ಇದ್ದಂತೆ ತೋರುವುದು.

ಗ್ರ್ಯಾಪ್ಟೊಲೈಟುಗಳು ಸಂಘಜೀವಿಗಳು ಇವುಗಳಿಗೆ ಕಂಕಾಲಗಳಿದ್ದುವು. ಈ ಕಂಕಾಲಗಳಿಗೆ ಪಾಲಿಪೆರಿ ಎಂದು ಹೆಸರು. ಪಾಲಿಪೆರಿಯ ಮಧ್ಯದಲ್ಲಿ ದಾರ ಅಥವಾ ಕಡ್ಡಿಯ ಹಾಗಿರುವ ಎಲುಬು ಉಂಟು. ಇದಕ್ಕೆ ವಿರ್ಗುಲ ಎಂದು ಹೆಸರು. ಇದರ ಉದ್ದಕ್ಕೂ ಹಲ್ಲುಗಳ ಅಥವಾ ಬಟ್ಟಲುಗಳ ಆಕಾರದ ಎಲುಬುಗಳ ಸಾಲುಗಳಿವೆ. ಬಟ್ಟಲುಗಳಿಗೆ ಹೈಡ್ರೊತೀಕ ಎಂದು ಹೆಸರು. ಗ್ರ್ಯಾಪ್ಟೊಲೈಟ್ ಪ್ರಾಣಿಗಳೂ ಈ ಬಟ್ಟಲುಗಳಲ್ಲಿ ವಾಸಿಸುತ್ತಿದ್ದಿರಬೇಕು. ಪ್ರತಿ ಬಟ್ಟಲಿಗೂ ಎರಡು ದ್ವಾರಗಳಿವೆ. ಒಂದು ದ್ವಾರದಿಂದ ಪಕ್ಕದ ಬಟ್ಟಲಿನೊಡನೆ ಸಂಪರ್ಕ ಏರ್ಪಟ್ಟಿದೆ. ಮತ್ತೊಂದು ದ್ವಾರ ಹೊರ ಪ್ರಪಂಚದ ಸಂಪರ್ಕ ಇಟ್ಟುಕೊಳ್ಳಲು ಸಹಾಯಕವಾಗಿದೆ. ಮೊದಲನೆಯ ದ್ವಾರಗಳೆಲ್ಲ ಒಂದೇ ಸಾಲಿನಲ್ಲಿದ್ದು ಅವುಗಳಿಂದ ಒಂದು ಕಾಲುವೆ ಏರ್ಪಟ್ಟಿದೆ. ಇದಕ್ಕೆ ಸಾಮಾನ್ಯ ಕಾಲುವೆ ಎಂದು ಹೆಸರು. ವಿರ್ಗುಲದ ಕೆಳತುದಿಗೆ ಕೋನಾಕಾರಾದ ಎಲುಬೊಂದು ತಾಕು ಹಾಕಿದಂತಿದೆ. ಇದಕ್ಕೆ ಸಿಕ್ಯುಲ ಎಂದು ಹೆಸರು.
ಮಾನೊಗ್ರ್ಯಾಪ್ಟಸಿನಲ್ಲಿ ಒಂದೇ ಒಂದು ಬಟ್ಟಲು ಸಾಲು ಉಂಟು. ಅಂಥ ಪ್ರಾಣಿ ಸಂಘಕ್ಕೆ ಏಕಪಂಕ್ತಿ ಸಂಘ ಎಂದು ಹೆಸರು. ಅನೇಕ ಗ್ರ್ಯಾಪ್ಟೊಲೈಟುಗಳಲ್ಲಿ ಎರಡು ಅಥವಾ ಹೆಚ್ಚು ಬಟ್ಟಲು ಸಾಲುಗಳು ಅನುಕ್ರಮವಾಗಿ ದ್ವಿಪಂಕ್ತಿ ಅಥವಾ ಬಹುಪಂಕ್ತಿ ಸಂಘಗಳು ಎಂದು ಹೆಸರು. ದ್ವಿಪಂಕ್ತಿ ಸಂಘಗಳಲ್ಲಿ ಎರಡು ಸಾಲುಗಳು ಮಧ್ಯೆ ಇರುವ ಕೋನಕ್ಕೆ ವಿಕೇಂದ್ರಿಕರಣ ಕೋನ ಎಂದು ಹೆಸರು. ಈ ಲಕ್ಷಣ ಗ್ರ್ಯಾಪ್ಟೊಲೈಟ್ ಪ್ರಾಣಿಗಳ ವರ್ಗೀಕರಣಕ್ಕೆ ಸಹಾಯಕವಾಗಿದೆ. ಜಾತಿಜಾತಿಗೂ ಕೆಲವು ವೇಳೆ ಪ್ರಭೇದ ಪ್ರಭೇದಕ್ಕೂ ಬಟ್ಟಲುಗಳು ಭಿನ್ನವಾಗಿರುತ್ತವೆ. ತುದಿಯಗಾತ್ರ ತುದಿಯ ಕಡೆಗೆ ಹೋದಂತೆಲ್ಲ ಹೆಚ್ಚಾಗುವುದು. ಬಟ್ಟಲುಗಳಿಗೆ ಕೊಳವೆ, ಕೋನ, ಪ್ರಿಸಮ್ ಆಕಾರಗಳು ಇರಬಹುದು. ಅವುಗಳಲ್ಲಿ ಪರಸ್ಪರ ಸಂಪರ್ಕ ಇರಬಹುದು ಇಲ್ಲವೆ ಇಲ್ಲದಿರಬಹುದು. ಸಿಕ್ಯುಲ ಒಂದು ಟೊಳ್ಳಾದ ಕೋನಾಕಾರದ ಕೊಳವೆ. ಅದರಲ್ಲಿ ಎರಡು ಭಾಗಗಳಿವೆ. ತೆಳು ಹೊದಿಕೆಯ ಮೇಲ್ಭಾಗ; ಬೆಳೆವಣಿಗೆಯ ಗೀರುಗಳಿಂದ ಕೂಡಿದ ದಪ್ಪ ಹೊದಿಕೆಯ ತಳಭಾಗ. ತಳಭಾಗದ ಕೆಳತುದಿಯಲ್ಲಿ ಒಂದು ಮುಳ್ಳು ಉಂಟು. ಮೇಲ್ಭಾಗ ವಿರ್ಗುಲವಾಗಿ ಮುಂದುವರಿಯುತ್ತದೆ. ಸಿಕ್ಯುಲ ಊರುಗೋಲಾಗಿ ಉಪಯುಕ್ತವಾಗಿರುವುದೇ ಅಲ್ಲದೆ ಪ್ರಜನನ ಕಾರ್ಯವನ್ನೂ ನಿರ್ವಹಿಸುವುದು.

ಪ್ರಜನನ ವಿಧಾನ : ಸಿಕ್ಯುಲದ ಮುಗ್ಗುಲಲ್ಲಿ ಒಂದು ಕುಡಿ ಹೊರಡುತ್ತದೆ. ಇದು ಮೊದಲನೆಯ ಬಟ್ಟಲಾಗಿ ಪರಿವರ್ತಿಸುತ್ತದೆ. ಬಳಿಕ ಈ ಬಟ್ಟಲು ಇಬ್ಭಾಗವಾಗಿ ಎರಡು ಬಟ್ಟಲುಗಳಾಗುತ್ತವೆ. ಇದೇ ರೀತಿ ಬಟ್ಟಲುಗಳು ಪುನಃ ಪುನಃ ಇಬ್ಭಾಗವಾಗಿ ಅವುಗಳ ಒಂದು ಸಾಲೇ ಆಗುತ್ತದೆ. ದ್ವಿಪಂಕ್ತಿ ಸಂಘಗಳಲ್ಲಿ ಕುಡಿಯ ಜೊತೆಗೆ ಕೊಳವೆಯೊಂದು ಹೊರಡುತ್ತದೆ. ಇದು ಬೇರೊಂದು ಮಗ್ಗುಲಿಗೆ ಹಾಯ್ದು ಅಲ್ಲಿ ಒಂದು ಬಟ್ಟಲಾಗಿ ಪರಿವರ್ತನೆಗೊಳ್ಳುತ್ತದೆ. ಇದು ಇಬ್ಭಾಗವಾಗಿ ಎರಡು ಬಟ್ಟಲುಗಳಾಗುತ್ತದೆ. ಮೇಲೆ ವಿವರಿಸಿದಂತೆ ಈ ಬಟ್ಟಲುಗಳೂ ಎರಡನೆಯ ಬಟ್ಟಲು ಸಾಲಾಗುತ್ತವೆ. ಜಲಜಶಿಲೆಗಳಲ್ಲಿ ಮೆಡೂಸಗಳ ಅವಶೇಷಗಳು ದೊರೆತಿಲ್ಲ. ಆದರೆ ಅವುಗಳ ಜನನ ಗ್ರಂಥಿಗಳನ್ನು ಹೋಲುವ ಕೋಶಗಳು ಸಿಕ್ಕಿವೆ. ಇವುಗಳ ರಚನಾ ವಿಧಾನವನ್ನಾಗಲಿ ಕ್ರಿಯಾತಂತ್ರವನ್ನಾಗಲಿ ನಿರ್ದಿಷ್ಟವಾಗಿ ಹೇಳುವಂತಿಲ್ಲ.

ಗ್ರ್ಯಾಪ್ಟೊಲೈಟುಗಳ ಮೃದು ಭಾಗಗಳು ರಕ್ಷಿಸಲ್ಪಟ್ಟಿಲ್ಲ. ಆದ್ದರಿಂದ ಈ ಪ್ರಾಣಿಗಳು ಯಾವ ವರ್ಗದ ಪ್ರಾಣಿಗಳಿಗೆ ಹತ್ತಿರದ ಸಂಬಂಧಿಗಳೆಂದು ಹೇಳುವುದು ಸುಲಭವಲ್ಲ. ಅಂಗರಚನೆಯ ಸಾಮ್ಯ ಮತ್ತು ಪ್ರಜನನ ಗ್ರಂಥಿಗಳನ್ನು ಪಡೆದಿರುವುದರ ಆಧಾರದ ಮೇಲೆ ಈ ಪ್ರಾಣಿಗಳು ಹೈಡ್ರೊಜೋವ ವರ್ಗದ ಒಂದು ಶಾಖೆ ಎಂದು ಆಲ್‍ಮನ್ ಅಭಿಪ್ರಾಯ ಪಟ್ಟಿದ್ದಾನೆ. ಆದರೆ ಹೈಡ್ರೊeóÉೂೀವ ವರ್ಗದ ಪ್ರಾಣಿಗಳಲ್ಲಿ ವಿರ್ಗುಲ, ಸಿಕ್ಯುಲಗಳಿಲ್ಲ. ಗ್ರ್ಯಾಪ್ಟೊಲೈಟುಗಳು ಬೆನ್ನೆಲುಬಿಲ್ಲದ ಪ್ರಾಣಿಗಳ ಮೂಲಶಾಖೆಯೆಂದು ವಿಜ್ಞಾನಿಗಳ ಇತ್ತೀಚಿನ ಅಭಿಪ್ರಾಯ.										(ಡಿ.ಆರ್.)
(ಪಿ.ಆರ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ